ನನ್ನೆದೆಯೊಳಗೆ ಮೃದುವಾಗಿ
ಮಧುರ ಭಾವಗಳ
ನಾದ ಮೀಟಿ
ಮುದಗೊಳಿಸುತ್ತಿದ್ದ ನೀನು
ದಿಗ್ಗನೆದ್ದು ಇದ್ದಕ್ಕಿದ್ದಂತೆ
ತೆಕ್ಕನೆ ಮಾಯವಾದ ಮೇಲೆ
ಭಿಕರ ಸ್ಮಶಾನ ಮೌನವಲ್ಲದೆ
ಮತ್ತೇನು ಉಳಿದೀತು ಇಲ್ಲಿ?
ಕಾದು ಕುಳಿತಿದ್ದೆ ನಾನು
ಕಾದ ಒಣ ನೆಲದಂತೆ
ನೀ ಬಂದು ಹರಿಸಿದೆ
ಒಲವ ವರ್ಷಧಾರೆ
ನಳನಳಿಸಿತು ಮನ
ಉಲ್ಲಾಸ ಪಲ್ಲವಿಸಿ
ಎಲ್ಲೆಲ್ಲೂ ಹಸಿರ ಹಬ್ಬ
ಹೂ ಹಣ್ಣು ಸುಗ್ಗಿ.
ಕಣ್ಣಿಕಿತ್ತ ಕರುವಿನಂತೆ
ಕಾಲ ಓಟ ಕಿತ್ತಿತ್ತು
ನೋಡುತ್ತಲಿದ್ದಂತೆ
ವರ್ಷಗಳೆ ಉರುಳಿತ್ತು.
ಕಲ್ಲುಮನ ನಿನದೆಂದು
ಅರಿವಾಗಲೇಯಿಲ್ಲ;
ಎಲ್ಲೆಯಿರದಂತೆ ನೀ ಆವರಿಸಿದ್ದೆ
ನನ್ನೊಳ ಹೊರಗನೆಲ್ಲ.
ಕಾರಣ ಬೇಕಿಲ್ಲ ನಿನಗೆ
ಕಡಿದು ಕಣ್ಮರೆಯಾದೆ
ಹೆಣವಾಗಿ ಉಸಿರುತ್ತ,
ವ್ರಣವಾಗಿ ನರಳುತ್ತ,
ಕಾಯುತ್ತಲಿದ್ದೇನೆ;
ಕಾಲನ ಹೆಜ್ಜೆಗಳ ಮೇಲೆ
ಹೆಜ್ಜೆಯಿಕ್ಕುತ್ತ.


Comments